ದೇಹಸೌಷ್ಠವ -
ಮಾಟವಾಗಿರುವ ಮೈಕಟ್ಟು ಮತ್ತು ದೃಢತೆ ಎರಕಗೊಂಡಿರುವ ದೇಹದ ಲಕ್ಷಣ (ಎಕ್ಸಲೆನ್ಸ್ ಆಫ್ ಫಿಸೀಕ್). ಪುರುಷದೇಹ ಸ್ತ್ರೀದೇಹ ಎರಡರಲ್ಲೂ ದೇಹಸೌಷ್ಠವ ಇರಲು ಸಾಧ್ಯ. ಶ್ರಮಕೆಲಸಗಳು, ವ್ಯಾಯಾಮ-ಇವುಗಳಿಂದ ದೇಹದಾಢ್ರ್ಯವನ್ನು ಗಳಿಸಬಹುದು. ಮೈಮಾಟವಾದರೋ ನೈಸರ್ಗಿಕ ಕೊಡುಗೆ. ಆದ್ದರಿಂದ ದೇಹಸೌಷ್ಠವ ಇರುವ ವ್ಯಕ್ತಿಗಳು ವಿರಳ. ಈ ಶತಮಾನದ ಪ್ರಾರಂಭದಲ್ಲಿ ಫ್ರೆಡರಿಕ್ ಮ್ಯೂಎಲರ್ ಉರುಫ್ ಯುಜೀನ್ ಸ್ಯಾಂಡೋ (1867 -1925) ಎಂಬಾತ ವಿಶ್ವದಲ್ಲೆ ಅತ್ಯಂತ ಉತ್ತಮವಾದ ದೇಹಸೌಷ್ಠವವನ್ನು ಪಡೆದವನೆಂದು ಪ್ರಸಿದ್ಧನಾಗಿದ್ದ. ಆ ಕಾಲದಲ್ಲಿ ಅವನಷ್ಟೆ ಶಕ್ತರಾದ ಅಥವಾ ಇನ್ನೂ ಹೆಚ್ಚು ಶಕ್ತರಾದ ಮಲ್ಲರಿದ್ದರೂ ಅವರು ಯಾರೂ ಅಷ್ಟು ಸುಂದರಕಾಯರಲ್ಲದ್ದರಿಂದ ಅವನ ದೇಹಸೌಷ್ಠವವನ್ನು ಮೀರಲಾರದಾದರು. ಶ್ರೀರಾಮ, ಭೀಮ, ಕೀಚಕ, ಸೈಂಧವ -ಇವರ ಹಾಗೂ ಗ್ರೀಕ್ ಪುರಾಣಗಳ ಅಕಿಲೀಸ್, ಹೆಕ್ಟರ್ ಮುಂತಾದವರ ದೇಹಸೌಷ್ಠವಗಳನ್ನು ಕಣ್ಣಿಗೆ ಕಟ್ಟುವಂತೆ ಕವಿಗಳು ವರ್ಣಿಸಿದ್ದಾರೆ. ಪ್ರಾಚೀನ ಗ್ರೀಕ್ ಶಿಲ್ಪಿಗಳು, ಇಟಲಿಯಲ್ಲಿ ಸುಮಾರು 450 ವರ್ಷಗಳ ಹಿಂದೆ ಬದುಕಿದ್ದ ಮೈಕೆಲಾಂಜೆಲೊ (1475 -- 1564) ಮುಂತಾದ ಶಿಲ್ಪಿಗಳು ಕಡೆದಿರುವ ಶಿಲಾಕೃತಿಗಳ ದೇಹಸೌಷ್ಠವ ಆದರ್ಶಯುತ.  ಉತ್ಕøಷ್ಟ ದೇಹಸೌಷ್ಠವವನ್ನು ನಮೂದಿಸಿ ಇವರು ಮಾನವನಷ್ಟೆ ಎತ್ತರವಾದ ಅಥವಾ ಅದಕ್ಕಿಂತಲೂ ದೊಡ್ಡದಾದ ಶಿಲಾಕೃತಿಗಳನ್ನು ಕಡೆದಿರುವುದು ದೇಹಸೌಷ್ಠವಕ್ಕೆ ಇವರು ಇತ್ತಿದ್ದ ಮೌಲ್ಯವನ್ನು ಮನವರಿಕೆ ಮಾಡುತ್ತದೆ. ಲೋಕೋತ್ತರವಾದ ದೇಹಸೌಷ್ಠವವುಳ್ಳ ಈ ಶಿಲಾಪ್ರತಿಮೆಗಳಲ್ಲಿ ಎದ್ದುಕಾಣುವ ಲಕ್ಷಣಗಳು ಇವು: ಉನ್ನತವಾಗಿ ಅಗಲವಾಗಿ ಉಬ್ಬಿದಂತಿರುವ ಹಣೆ, ಹೆಕ್ಕತ್ತಿನ ಮೇಲೆ ಅಲಂಕಾರಿಕವಾಗಿ ಜೋತುಬಿದ್ದಿರುವ ನಿಡುಗೂದಲು, ಮಾಟವಾದ ಅಳತೆಯ ಹುಬ್ಬು, ಮೂಗು, ಬಾಯಿ, ಅವುಗಳ ನೆರೆಯ ಮಡಿಕೆ, ಗೆರೆ, ಹಾಗೂ ಮೂಲೆಗಳು, ಪೂರ್ಣವಾಗಿ ತೆರೆದ ಅಧಿಕಾರ ಸಾಂಕೇತಿಕ ದೃಷ್ಟಿಯನ್ನು ಬೀರುವ ಅಗಲವಾದ ಕಣ್ಣುಗಳು, ಮುಂಡಕೈಗಳು ಸ್ವಲ್ಪ ಗುಡ್ಡಾಗಿಯೂ ಕಾಲುಗಳು ಸ್ವಲ್ಪ ಉದ್ದವಾಗಿಯೂ ಇದ್ದು ವಿಶೇಷ ಸೂಚನೆಗಳನ್ನು ಹೊಮ್ಮುವ ವಿವಿಧ ಅಂಗಗಳ ಭಂಗಿ, ಇತ್ಯಾದಿ. ಸುಮಾರು 2,700 ವರ್ಷಗಳ ಹಿಂದೆ ಗ್ರೀಸಿನಲ್ಲಿ ಒಲಿಂಪಿಕ್ ಸ್ಪರ್ಧೆಗಳು ಏರ್ಪಟ್ಟು ನಾಲ್ಕು ಶತಮಾನಗಳ ಕಾಲ ಮುಂದುವರಿದದ್ದು ಅವರು ದೇಹಸೌಷ್ಠವಕ್ಕೆ ಪ್ರಾಮುಖ್ಯ ಕೊಟ್ಟಿದ್ದನ್ನು ವ್ಯಕ್ತಪಡಿಸುತ್ತದೆ. ಒಲಿಂಪಿಕ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಸ್ಪರ್ಧಿಗಳಲ್ಲಿ ದೇಹದ ಆದ್ಯಂತವೂ ದಪ್ಪವಾದ ದೃಢಸ್ನಾಯುಗಳುಳ್ಳ ತೋರಕಾಯನಿಗಿಂತ, ವಿವಿಧ ಸ್ನಾಯುಗಳನ್ನು ಅನುಗುಣ ಪರಿಮಾಣಕ್ಕೆ ಅನುಸಾರವಾಗಿ ವೃದ್ಧಿಗೊಳಿಸಿದ್ದ ವ್ಯಕ್ತಿ ಉತ್ತಮತರ ದೇಹಸೌಷ್ಠವ ಉಳ್ಳವನು ಎನಿಸಿಕೊಳ್ಳುತ್ತಿದ್ದ. ಎಂಥ ಶ್ರಮದಾಯಕ ಸ್ಪರ್ಧೆಗಳಲ್ಲೂ ಧೀರನಾಗಿ, ಉದಾತ್ತನಾಗಿ, ಉಲ್ಲಸಿತಮುಖಿಯಾಗಿ ಇರುವ ವ್ಯಕ್ತಿ ಉತ್ಕøಷ್ಟವೆಂದು ಪರಿಗಣಿಸಲ್ಪಡುತ್ತಿದ್ದ. ಇದು ಇಂದಿನ ಒಲಿಂಪಿಕ್ ವಿಜಯಿಗಳ ವಿಷಯದಲ್ಲಿ ಹೇಳುವ ಹಾಗಿಲ್ಲ. ಸರಿಯೋ ತಪ್ಪೋ ಉದಾತ್ತ ಭಾವನೆಯೋ ಸಂಕುಚಿತ ಬುದ್ಧಿಯೋ ಹೇಗೋ ಅಂತೂ ವಿಜಯಗಳಿಸುವುದು ಮುಖ್ಯವೆಂದು ಇಂದಿನ ನಡತೆ, ಸ್ಪರ್ಧಾನಂತರ ವಿಜಯಿಗಳ ಮುಖಭಾವ, ಮನೋವೃತ್ತಿ, ಠೀವಿಯ ಅಡ್ಡಾಟ-ಇವು ಪ್ರಾಚೀನ ಗ್ರೀಕರಿಗೆ ಅವಹೇಳನ ಮಾಡುವಂತಿವೆ.

ಪ್ರಾಚೀನ ಗ್ರೀಕ್ ಯುವಕರು ಅಂಗಸೌಷ್ಠವದ ಮೇಲ್ಮೆಗಾಗಿ ಅಥವಾ ಒಲಿಂಪಿಕ್ ಸ್ಪರ್ಧೆಯಲ್ಲಿ ವಿಜಯಗಳಿಕೆಗಾಗಿ ಮಾತ್ರ ತರಬೇತಿ ಪಡೆದು ಸಾಧನೆ ಮಾಡುತ್ತಿರಲಿಲ್ಲ. ಜನತೆಯ ಮುಂದಾಳುಗಳಾದ ವ್ಯಕ್ತಿಗಳೆಲ್ಲರೂ ಬಲಶಾಲಿಗಳಾಗಿ, ಚುರುಕಾಗಿ, ಧೈರ್ಯವಂತರಾಗಿರಬೇಕೆಂದು ಸಾಕ್ರಟೀಸನೂ ಕೂಡಿ ಇತರ ಬೋಧಕರು ಪದೇ ಪದೇ ಒತ್ತಿ ಹೇಳುತ್ತಲೆ ಇದ್ದರು. ಆದ್ದರಿಂದ ಗಣ್ಯವ್ಯಕ್ತಿಗಳೆಲ್ಲರೂ ಅವರ ತಾರುಣ್ಯದಲ್ಲಿ ಜ್ಞಾನಾರ್ಜನೆಯ ಜೊತೆಗೇ ಅಂಗಸಾಧನೆಯಲ್ಲಿ ಕೂಡ ತರಬೇತಿ ಪಡೆಯುತ್ತಿದ್ದರು. ಜೊತೆಗೆ ಗ್ರೀಸಿನ ಹವಾಗುಣದಿಂದಾಗಿ ವ್ಯಕ್ತಿ ಮನೆಯಿಂದ ಹೊರಗೇ ಕಾರ್ಯೋನ್ಮುಖವಾಗಿ ಹೆಚ್ಚು ಕಾಲ ಕಳೆಯಬೇಕಾಗಿತ್ತು; ಅಳ್ಳಕವಾದ ಬಟ್ಟೆ ಧರಿಸಬೇಕಾಗಿತ್ತು. ಇವೆಲ್ಲ ಅವರ ಚಲನವಲನ ದೇಹಸೌಷ್ಠವಗಳ ಮೇಲೆ ಪ್ರಭಾವಿಸಿ ಪ್ರಾಚೀನ ಗ್ರೀಕನೆಂದರೆ ದೃಢಕಾಯದ ಉನ್ನತ ವ್ಯಕ್ತಿತ್ವ ಉಳ್ಳ ಪುರುಷ ಎಂದು ಸಾಮಾನ್ಯವಾಗಿ ಗಣಿಸುವಂತಿತ್ತು. ಇವರು ತಿನ್ನುತ್ತಿದ್ದುದು ಗೋದಿ ಅಥವಾ ಇನ್ನಾವುದೋ ಧಾನ್ಯದಿಂದ ತಯಾರಾದ ಶುಷ್ಕ, ಸರಳ ಆಹಾರ, ಜೊತೆಗೆ ಮೊಸರಿನ ಕೆನೆ, ಮಧ್ಯೆ ಮಧ್ಯೆ ಅಂಜೂರ, ಇಷ್ಟೆ (ಇವರಲ್ಲಿ ಮಾಂಸಾಹಾರ ಪ್ರಾರಂಭವಾದದ್ದು ಬಹು ಕಾಲ ಕಳೆದ ಮೇಲೆ). ಕುಡಿಯುತ್ತಿದ್ದುದು ಶುದ್ಧವಾದ ನೀರು. ಅನೇಕರು ಮದ್ಯವನ್ನು ಸೇವಿಸುತ್ತಿದ್ದರೂ ಮನೆಯಲ್ಲೆ ತಯಾರಾದ್ದನ್ನು ಮಾತ್ರ ಮಿತವಾಗಿ ಸೇವಿಸುತ್ತಿದ್ದರು, ಅಷ್ಟೆ. ಒರಟಾದ ಮತ್ತು ಶ್ರಮದಾಯಕವಾದ ಕೆಲಸಗಳನ್ನು ಗುಲಾಮರ ತಲೆಗೆ ಕಟ್ಟಿ ಇವರು ಅಂಗಸಾಧನೆ ವಿದ್ಯಾಭ್ಯಾಸಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಸ್ಪರ್ಧೆಯ ಮೇಲೆ ಕಣ್ಣುಳ್ಳ ಯುವಕ ಶ್ರಮವ್ಯಾಯಾಮ ಹಾಗೂ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದ. ಸ್ನಾಯುಗಳಿಗೆ ಮಾರ್ದವತೆ ಲಭಿಸುವಂತೆ ಮೈಕೈಗೆಲ್ಲ ಎಣ್ಣೆಸವರಿ ಪುರುಸೊತ್ತಾಗಿ ನೀವಿಸಿಕೊಳ್ಳುತ್ತಿದ್ದುದೂ ಉಂಟು. ಸ್ನಾಯುಗಳು ಸಡಿಲ ಸ್ಥಿತಿಯಲ್ಲಿ ಬೆಣ್ಣೆಯಂತೆ ಮೃದುವಾಗಿಯೂ ಬಿಗಿತುಗೊಂಡಾಗ ಕಬ್ಬಿಣದಂತೆ ಗಡುಸಾಗಿಯೂ ಇರುವಂತೆ ಮಾಡಲು ಈತ ಹವಣಿಸುತ್ತಿದ್ದ. ಪ್ರಾಚೀನ ಗ್ರೀಸಿನಲ್ಲಿ ಬುದ್ಧಿ ಚುರುಕಿಲ್ಲದವರಾದರೂ ಬಾಳಬಹುದಾಗಿತ್ತು. ಆದರೆ ದೇಹದಾಢ್ರ್ಯವಿಲ್ಲದವರಿಗೆ ಪುರಸ್ಕಾರವಿರಲಿಲ್ಲ. ಅವರನ್ನು ಜನ ಕೊಂದುಹಾಕುತ್ತಿರಲಿಲ್ಲ ನಿಜ. ಆದರೆ ಅಂಥವರಿಗೆ ರೋಗ ಬಂದರೆ ಮುತುವರ್ಜಿ ವಹಿಸಿ ಚಿಕಿತ್ಸೆ ಮಾಡುತ್ತಿರಲಿಲ್ಲ. ಗ್ರೀಕ್ ವೈದ್ಯಾಧಿದೇವತೆಯಾದ ಈಸ್ಕ್ಯೂಲೇಪಿಯಸ್ ಎಂಬಾತ ವೈದ್ಯಕೀಯವನ್ನು ಪ್ರಚುರಪಡಿಸಿದ್ದು ಅಂಗವಿಕಲರ, ಬುದ್ಧಿಮಾಂದ್ಯರ ಹಾಗೂ ದುರ್ಬಲಿಗಳ ಚಿಕಿತ್ಸೆಗಲ್ಲ; (ಅಂಥವರನ್ನು ಚಿಕಿತ್ಸಿಸಿ ದುರ್ಬಲ ಸಂತಾನಜನಕರನ್ನಾಗಿ ಮಾಡುವುದು ದೇಶೋನ್ನತಿಗೆ ವಿಹಿತವಲ್ಲ); ಅದರೆ ವಿನಾಕಾರಣ ಸಂಭವಿಸಿದ ಕಾಯ ರೋಗಕ್ಕಾಗಿ ಉಗ್ರವಾದ ಔಷಧ ಚಿಕಿತ್ಸೆ ಇಲ್ಲವೆ ಶಸ್ತ್ರಚಿಕಿತ್ಸೆ ಮಾಡಿ ಅನತಿಕಾಲದಲ್ಲಿ ವ್ಯಕ್ತಿ ಮಾಮೂಲು ಕೆಲಸಕ್ಕೆ ಹಾಜರಾಗುವಂತೆ ಮಾಡುವುದಕ್ಕೆ ಎಂದು ಸಾಕ್ರಟೀಸ್ ಸಾರಿ ಸಾರಿ ಹೇಳುತ್ತಿದ್ದ. ದೇಹದಾಢ್ರ್ಯ, ದೇಹಸೌಷ್ಠವ ಈ  ವಿಷಯಗಳಲ್ಲಿ ಪ್ರಾಚೀನ ಗ್ರೀಕರಿಗೆ ಇದ್ದ ಇಂಥ ಧ್ಯೇಯ ರೋಮನ್ನರ ಕಾಲದ ಗ್ರೀಕರಲ್ಲಿ ಕಣ್ಮರೆಯಾಗಿ ಹೋಯಿತು. ಮಾನಸಿಕವಾಗಿ ಅವರೂ ಚುರುಕಾಗಿಯೇ ಇದ್ದರು. ಅದರೆ ಅವರ ಶೀಲ ಅಧೋಗತಿಗೆ ಇಳಿದಿತ್ತು. ನೆರೆಯವರನ್ನು ಮೋಸಗೊಳಿಸಿ ಅನುಚಿತರೀತಿಯಲ್ಲಿ ಜೀವನಸುಖವನ್ನು ಲಪಟಾಯಿಸುವುದರಲ್ಲಿ ನಿಪುಣರಾದರು. ಅವರ ಮುಖಮುದ್ರೆ ಮತ್ತು ದೇಹದ ಹೊರರೂಪ ಕೂಡ ಬದಲಾಗಿ ಹೋಗಿತ್ತು. ಈ ಅವನತಿಗೆ ಕಾರಣ ತಿಳಿಯದು. ಬಹುಶಃ ಕ್ರಿ.ಪೂ. 400ರಲ್ಲಿ ಪರ್ಷಿಯದಿಂದ ಸೋತು ಓಡಿಬಂದ ಗ್ರೀಕ್ ಸಂತಾನದಲ್ಲಿ ಇಂಥ ಅವನತಿ ಪ್ರಾರಂಭವಾಯಿತು. ಆಗ ಗ್ರೀಸಿನಲ್ಲಿ ತಲೆಹಾಕಿದ ಮಲೇರಿಯ ರೋಗವೂ ಇದಕ್ಕೆ ಕಾರಣವಾಗಿದ್ದಿರಬಹುದು.

	ಗ್ರೀಸಿನಲ್ಲಿದ್ದಂತೆ ರೋಮಿನಲ್ಲೂ ಉತ್ಕøಷ್ಟ ದೇಹಸೌಷ್ಠವಕ್ಕೆ ಮನ್ನಣೆ ಇತ್ತು. ಆದರೆ ರೋಮಿನ ವ್ಯಕ್ತಿ ಗ್ರೀಕನಂತೆ ಉನ್ನತಕಾಯನಲ್ಲ-ಕುಳ್ಳಾಗಿ ದಪ್ಪವಾಗಿ ಅದರೆ ದೃಢವಾಗಿ ಇದ್ದವ. ಸಾಮಾನ್ಯವಾಗಿ ಇವ ಸೈನಿಕ. ಪ್ರಾಜ್ಞನಾಗುವುದಕ್ಕಿಂತ ಹೆಚ್ಚಾಗಿ ಸೈನ್ಯದೊಡನೆ ದೂರಪ್ರಯಾಣಮಾಡಿ ಹೋರಾಡಲು ತಕ್ಕಂತೆ ಕಷ್ಟಸಹಿಷ್ಣುವಾಗಿ ಶಿಕ್ಷೆಗೊಂಡವ. ವಕೀಲಿ ಬುದ್ಧಿಯಿಂದ ಜೀವನಸೌಕರ್ಯಗಳನ್ನು ಗಿಟ್ಟಿಸಿಕೊಳ್ಳುವುದರ ಮೇಲೆ ಕಣ್ಣುಳ್ಳವ. ಆದ್ದರಿಂದ ಇಂಥ ವ್ಯಕ್ತಿ ಆಟ ಓಟ ವ್ಯಾಯಾಮಗಳಲ್ಲಿ ಬೇರೆಯವರೊಡನೆ ಸ್ಪರ್ಧಿಸಿ ಉತ್ತಮನೆಂದು ಗಣಿಸಲ್ಪಡಬೇಕೆಂಬ ಮನೋಭಾವ ಉಳ್ಳದನಾದ. ಗಣ್ಯಯೋಧನೆಂದು ಗಣಿಸಲ್ಪಟ್ಟ ರೋಮನ್ ವ್ಯಕ್ತಿ ವೈಯಕ್ತಿಕ ಹಾಗೂ ಸಾಂಸಾರಿಕ ಕೆಲಸಗಳಿಗಾಗಿ ಅತ್ಯಧಿಕ ಸಂಖ್ಯೆಯಲ್ಲಿ ಗುಲಾಮರನ್ನು ಇಟ್ಟುಕೊಂಡು ಶಾಂತಕಾಲದಲ್ಲಿ ವಿಲಾಸಜೀವನ ನಡೆಸುವಂತಾದ. ಕೇವಲ ಬಡವ ಎನ್ನಿಸಿಕೊಂಡ ರೋಮನ್ನನೂ ಹತ್ತುಜನ ಗುಲಾಮರನ್ನು ಇಟ್ಟುಕೊಂಡಿದ್ದನೆಂದು ತಿಳಿದು ಬಂದಿದೆ. ಹೀಗಾಗಿ ರೋಮಿನಲ್ಲಿ ಮನೋಲ್ಲಾಸಕ್ಕಾಗಿ ಸರ್ಕಸ್ಸುಗಳು ಮಲ್ಲರಂಗಗಳು (ಆಂಫಿಥಿಯೇಟರ್) ಸೃಷ್ಟಿಯಾದವೇ ಹೊರತು ವೈಯಕ್ತಿಕ ಮೇಲ್ಮೆಯನ್ನು  ತೋರಿಸುವ ಸ್ಪರ್ಧಾಯುಕ್ತ ಕ್ರೀಡೆಗಳಾಗಲಿ, ಪಂದ್ಯಗಳಾಗಲಿ ಏರ್ಪಡಲಿಲ್ಲ.  ಪ್ರಾಚೀನ ಗ್ರೀಕ್‍ವ್ಯಕ್ತಿ ಉನ್ನತಕಾಯದ ದೇಹಸೌಷ್ಠವ ಉಳ್ಳ ವ್ಯಕ್ತಿ ಎನ್ನಿಸುತ್ತಿದ್ದಂತೆ ಪ್ರಾಚೀನ ರೋಮನ್ ವ್ಯಕ್ತಿ ಎಂದೂ ಆ ಭಾವನೆಗೆ ಎಡೆಗೊಡಲಿಲ್ಲ.

ಹೀಗೆ ದೇಹಸೌಷ್ಠವ ಕೆಲವು ಜನಾಂಗಗಳಲ್ಲಿ ಹೆಚ್ಚುಸಾಮಾನ್ಯವಾಗಿ ಕಂಡು ಬರುವುದು ವ್ಯಕ್ತವಾಗಿದೆ. ಆಫ್ರಿಕದ ನೀಗ್ರೊ ಜನಾಂಗಕ್ಕೆ ಸೇರಿದವರೆಲ್ಲರೂ (ಅಮೆರಿಕದ ಈಚಿನ ನೀಗ್ರೋಗಳಲ್ಲ) ಸಾಮಾನ್ಯವಾಗಿ ದೃಢಕಾಯರು. ದೀರ್ಘಕಾಲಿಕ ದೇಹಶ್ರಮವನ್ನು ದಣಿವೇ ಇಲ್ಲದೆ ಸಹಿಸಬಲ್ಲ ಇವರಿಗೇ ದಣಿವಾಟಗಳ ಸ್ಪರ್ಧೆಗಳಲ್ಲಿ ವಿಜಯ ಸಾಮಾನ್ಯವಾಗಿ ಸಿದ್ಧ. ಎತ್ತರ ಮತ್ತು ಗಾತ್ರವಾಗಿರುವ ಇವರು ಸಾಧನೆಯಿಂದ ದೇಹಸೌಷ್ಠವ ಗಳಿಸುವುದು ಸುಲಭ. ದೇಹಸೌಷ್ಠವ ಕೆಲವು ಮನೆತನಗಳ ವೈಶಿಷ್ಟ್ಯವೂ ಹೌದು. ಬಹುಶಃ ದೇಹದ ಮಾಟ ಅನುವಂಶಿಕಗುಣ.     

	ಮಾನವದೇಹದ ಆಕಾರವೈವಿಧ್ಯ ಬಹಳ. ವ್ಯಕ್ತಿಗಳು ಬೃಹದ್ದೇಹಿಗಳಾಗಿರಬಹುದು, ಗುಬ್ಬಚ್ಚಿಯಂತಿರಬಹುದು, ಕೃಶಾಂಗಿಗಳಾಗಿರಬಹುದು, ಬೊಜ್ಜು ಬೊಜ್ಜಾಗಿರಬಹುದು, ಉದ್ದಕಾಲಿನವರಾಗಿರಬಹುದು, ಗಿಡ್ಡಕಾಲಿನವರಾಗಿರಬಹುದು, ಆಜಾನುಬಾಹುಗಳಾಗಿರಬಹುದು, ಮೋಟುತೋಳಿನವರಾಗಿರಬಹುದು. ಮೊದಲ ದೃಷ್ಟಿಗೇ ಮನವರಿಕೆ ಆಗುವಂತೆ ಈ ಎಲ್ಲರನ್ನೂ ಅವರವರ ಮೈಕಟ್ಟಿಗೆ ಅನುಸಾರವಾಗಿ ನೀಳದೇಹಿಗಳು, ಸ್ಥೂಲಕಾಯರು ಮತ್ತು ಮಧ್ಯಮಮೈಕಟ್ಟು ಉಳ್ಳವರು ಎಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಒಂದೊಂದು ಗುಂಪಿನಲ್ಲೂ ವರಿಷ್ಠ, ಮಧ್ಯಸ್ಥ ಮತ್ತು ಕನಿಷ್ಠ ಗುಣಗಳುಳ್ಳವರು ಇರುತ್ತಾರೆ. ತೆಳ್ಳಗೆ ಎತ್ತರವಾಗಿ ಕಿರು ಎದೆ ಸಣ್ಣಹೊಟ್ಟೆ ಸಣ್ಣನಡುಗಳಿಂದ ಬೇಟೆನಾಯಿಯ ಹೋಲುವ ಮೈಕಟ್ಟುಳ್ಳ ನೀಳದೇಹಿಗಳನ್ನು ಪಾಶ್ಚಾತ್ಯವಿಜ್ಞಾನಿಗಳು ಎಸ್ತೀನಿಕ್ ಮೈಕಟ್ಟಿನವರು ಎನ್ನುತ್ತಾರೆ. ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಇವರು ಬಹು ಚಟುವಟಿಕೆಯವರು. ಆಟ ಓಟಗಳ ಸ್ಪರ್ಧೆಗಳಲ್ಲಿ ಭಾಗವಹಿಸಬಲ್ಲವರು. ಈ ಗುಂಪಿಗೆ ಸೇರಿದ ವ್ಯಕ್ತಿ ವಾಚಾಳಿ, ಹರ್ಷಿ, ಚುರುಕು ಬುದ್ಧಿಯುಳ್ಳವ. ತಕ್ಕ ಮಟ್ಟಿಗೆ ಚೆನ್ನಾಗಿಯೇ ತಿಂದು ಜೀರ್ಣಿಸಿಕೊಳ್ಳಬಲ್ಲ. ಆದರೆ ಮೇದಸ್ಸುಯುಕ್ತ ಆಹಾರವನ್ನೇ ಅತ್ಯಧಿಕವಾಗಿ ತಿನ್ನುತ್ತಿದ್ದರೂ ಎಂದೂ ಸ್ಥೂಲಕಾಯನಾಗಲಾರ. ಈ ವ್ಯಕ್ತಿಗಳದು ವಾತ ಪ್ರಕೃತಿ. ಇವರು ಕ್ಷಯ, ಜಠರದಲ್ಲಿ ಹುಣ್ಣು ಮೊದಲಾದ ರೋಗಗಳಿಂದ ದೀರ್ಘಕಾಲಿಕವಾಗಿ ಪೀಡಿತರಾಗಬಹುದು. ಇಂಥವರು ದೇಹಬಾಧೆ ಮನಸ್ಸಿನ ಅತಂಕಗಳಿಂದ ಸಹಜವಾಗಿಯೇ ಪಿರಿಪಿರಿಗುಟ್ಟುವವರಾಗಿ ನೀಳದೇಹಿಗಳ ಕನಿಷ್ಠವರ್ಗಕ್ಕೆ ಸೇರಿದವರಾಗಿರುತ್ತಾರೆ. ಇವರಿಗೆ ದೇಹಸೌಷ್ಠವ ಏನು ಮಾಡಿದರೂ ದೊರಕುವುದಿಲ್ಲ. ನೀಳದೇಹಿಗಳಲ್ಲಿ ವರಿಷ್ಠ ಕೂಡ ದೇಹ ಸೌಷ್ಠವವನ್ನು ಆರ್ಜಿಸಬಲ್ಲನೆಂಬುದು ಅನುಮಾನ.

	ಸ್ಥೂಲಕಾಯರನ್ನು ಪಾಶ್ಚಾತ್ಯವಿಜ್ಞಾನಿಗಳು ಹೈಪರ್‍ಸ್ಟೀನಿಕ್ ಮೈಕಟ್ಟಿನವರು ಎನ್ನುತ್ತಾರೆ. ಇವರು ಸಾಮಾನ್ಯವಾಗಿ ಜಡವ್ಯಕ್ತಿಗಳು. ಮಹೋದರ, ಬೊಜ್ಜುಮೈ, ಮಂದಚಲನೆ ಇವು ಇವರ ವೈಶಿಷ್ಟ್ಯ.  ನಿದ್ರೆ ಹೆಚ್ಚು. ಹುಟ್ಟು ಸೋಮಾರಿಗಳಾಗಿ, ಕೆಲಸಮಾಡಲು ಸದಾ ಹಿಂದೇಟು ಹೊಡೆಯುವವರಾದರೂ ಧಾರಾಳವಾಗಿ ಬೆವರು ಸುರಿಸುವುದರಲ್ಲಿ ನಿಸ್ಸೀಮರು. ಏನೂ ಮಾಡದೆ ಸುಮ್ಮನೆ ಇರುವಾಗಲೂ ಇವರು ಬೆವರು ಸುರಿಸುತ್ತಿರುವ ಸೋಜಿಗ ಅನೇಕರಿಗೆ ತಿಳಿದ ವಿಷಯ. ಸಿಹಿ ಮತ್ತು ಜಿಡ್ಡು ಹೆಚ್ಚಾಗಿರುವ ಭಕ್ಷ್ಯಭೋಜ್ಯಗಳ ಮೇಲೆ ಆಸೆ. ಹೆಚ್ಚಾಗಿ ಊಟಮಾಡುವುದೇ ಅಲ್ಲದೆ ಮಧ್ಯೆ ಮಧ್ಯೆ ಕಂಡಹಾಗೆ ಕಾಣದ ಹಾಗೆ ಬಾಯಾಡುತ್ತಿರುವುದು ಇವರ ಸ್ವಭಾವ. ಇದರಿಂದ ಅನೇಕ ವೇಳೆ ಪ್ರತ್ಯಕ್ಷವಾಗಿ ಊಟಮಾಡುವ ಪರಿಮಾಣ ಕಡಿಮೆಯೇ ಆಗಿರುವುದುಂಟು. ಸದಾ ಬಾಯಾಡುತ್ತಿದ್ದರೆ ಏನು ಉಂಡಾರು? ಅದರೆ ಬೊಜ್ಜು ಹೆಚ್ಚುವುದಕ್ಕಂತೂ ತಡೆಯಿಲ್ಲ. ಈ ಗುಂಪಿನವರದು ಕಫ ಪ್ರಕೃತಿ. ಮಧುಮೂತ್ರರೋಗ, ರಕ್ತ ಒತ್ತಡದ ಅಧಿಕ್ಯ ಇವರಲ್ಲಿ ಸಾಮಾನ್ಯ. ಪರಿಣಾಮವಾಗಿ ಇವರು ಮಿದುಳಿನಲ್ಲಿ ರಕ್ತಸ್ರಾವ, ಪಕ್ಷವಾತ, ಗುಂಡಿಗೆಯ ಅಪಘಾತ ಮುಂತಾದವುಗಳಿಂದ ಪೀಡಿತರಾಗಿರುತ್ತಾರೆ.  ಈ ಗುಂಪಿನ ವ್ಯಕ್ತಿಗಳಿಗೂ ದೇಹಸೌಷ್ಠವ ಎಟುಕದ ಮಾತು.

	ಮಧ್ಯಮ ಮೈಕಟ್ಟಿನ ವ್ಯಕ್ತಿಗಳನ್ನು ಪಾಶ್ಚಾತ್ಯ ವಿಜ್ಞಾನದ ಪ್ರಕಾರ ಸ್ಥೀನಿಕ್ ಗುಂಪಿಗೆ ಸೇರಿಸಲಾಗಿದೆ. ಇವರದು ಪಿತ್ಥಪ್ರಕೃತಿ. ಸಾಮಾನ್ಯವಾಗಿ ಆರೋಗ್ಯವಂತರು, ಉತ್ಸಾಹಿಗಳು, ಕಟ್ಟುಮಸ್ತಾಗಿರುವ, ತೋರಮಾಂಸಖಂಡಗಳುಳ್ಳ ಬಲಿಷ್ಠ ವ್ಯಕ್ತಿಗಳು. ತೆಳವೂ ಅಲ್ಲದೆ ಬೊಜ್ಜು ಇಲ್ಲದ ಇಂಥವರು ಸ್ವಾಭಾವಿಕವಾಗಿಯೇ ದೇಹಸೌಷ್ಠವಕ್ಕೆ ಹೇಳಿಮಾಡಿಸಿದಂತಿರುವವರು. ಈ ಗುಂಪಿನವರು ಬೆಳೆಯುವ ವಯಸ್ಸಿನಲ್ಲಿ ಸಾಕಷ್ಟು ತಿಂದು, ಹುಡುಗರು ಆಟ ಅಂಗಸಾಧನೆಗಳನ್ನು ತಕ್ಕಷ್ಟು ಮಾಡಿಕೊಂಡಿದ್ದರೆ, ಹುಡುಗಿಯರ ನೃತ್ಯ, ಜಿಗಿದಾಟ (ಸ್ಕಿಪ್ಪಿಂಗ್) ಇವುಗಳಲ್ಲಿ ನಿರತರಾಗಿದ್ದರೆ ಅಷ್ಟೆ ಸಾಕು. ಇವರಿಗೆ ಒಳ್ಳೆಯ ಕಾಯ ಲಭ್ಯವಾಗುತ್ತದೆ. ಅದರೆ ಯೌವನದಲ್ಲಿ ಕವಾಯತು ಮತ್ತು ಸಕ್ರಮವಾದ ಗಡುತರ ವ್ಯಾಯಾಮವನ್ನು ಮಾಡಿದರೆ ಮಾತ್ರ ದೇಹಸೌಷ್ಠದ ಗಿಟ್ಟುವುದು. ಸಾಮಾನ್ಯವಾಗಿ ಇಂಥ ಸಾಧನೆಯಿಂದ ಮಧ್ಯಮ ಕಾಯದ ವ್ಯಕ್ತಿ 20--25 ವರ್ಷ ವಯಸ್ಸಾಗುವಷ್ಟರಲ್ಲಿ ದೇಹಸೌಷ್ಠವ ಪಡೆದಿರುಬಹುದು. ಕ್ರಮವಾದ ವ್ಯಾಯಾಮವನ್ನು ಮುಂದುವರಿಸಿಕೊಂಡು ಈ ಗುಂಪಿನ ವ್ಯಕ್ತಿಗಳೆಲ್ಲರೂ 50--55 ವರ್ಷ ವಯಸ್ಸಿನ ತನಕ ದೇಹಸೌಷ್ಠವವನ್ನು ರೂಢಿಸಿಕೊಂಡಿರಬಲ್ಲರು. ಅನೇಕರು ಇನ್ನೂ 20-30 ವರ್ಷಗಳು ತಮ್ಮ ದೇಹದ ಸೊಬಗನ್ನು ಕಾಪಾಡಿಕೊಂಡು ಬರಬಲ್ಲರು. ದೇಹಸೌಷ್ಠವದ ಜೊತೆಗೆ ಮಾನಸಿಕ ಉನ್ನತಿಯನ್ನೂ ಪಡೆದಿರುವ ಈ ಗುಂಪಿಗೆ ಸೇರಿದ ವ್ಯಕ್ತಿಗಳ ಮುಖದಲ್ಲಿ ಒಂದು ವಿಲಕ್ಷಣ ತೇಜಸ್ಸು ಇರುವುದು. ಇವರ ಸ್ಫುಟವಾದ ಆಕರ್ಷಕ ಮೈಕಟ್ಟು ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡುವಂತಿರುತ್ತದೆ. ಆದರೆ ಕ್ರಮವತ್ತಾಗಿ ವ್ಯಾಯಾಮ ಮಾಡುತ್ತ ದೇಹಸೌಷ್ಠವವನ್ನು ಕಾಪಾಡಿಕೊಳ್ಳದೆ ಇದ್ದರೆ ನಡುವಯಸ್ಸು ಕಳೆದ ಬಳಿಕ ಇವರೆಲ್ಲರೂ ಬೊಜ್ಜು ಬೆಳೆಸಿಕೊಂಡು ಸ್ಥೂಲದೇಹಿಗಳಾಗುವುದು ಖಂಡಿತ.

	ಜೀವಿಸುವುದಕ್ಕೆ ವಾಯು, ನೀರು ಆಹಾರ ನಿದ್ರೆಗಳು ಅಗತ್ಯವಾಗಿರುವಂತೆ ದೃಢವಾದ ಚಂದವಾದ ಮೈಕಟ್ಟನ್ನು ಪಡೆಯಬೇಕಾಗಿದ್ದರೆ ಅಂಗಸಾಧನೆ, ಸ್ನಾನ, ವಿಶ್ರಾಂತಿ, ಪೌಷ್ಟಿಕ ಆಹಾರಗಳು ಅಗತ್ಯ. ಮಾನವಯಂತ್ರವನ್ನು ಚಾಲೂಮಾಡಿ ಅನಂತರ ಅದನ್ನು ಒರೆಸಿ, ತಣಿಸಿ, ಇಂಧನವನ್ನು ತುಂಬುವ ಇಂಥ ಕ್ಲುಪ್ತ ಕ್ರಮದಿಂದ ದೇಹ ದೃಢವಾಗುವುದೇ ಅಲ್ಲದೆ ಎತ್ತರ, ಗಾತ್ರ, ಎದೆಯ ಅಗಲ ಇವು ಒಂದಕ್ಕೊಂದು ಸರಿಹೊಂದುವಂತೆ ಪ್ರಮಾಣಯುಕ್ತವಾಗಿ ವೃದ್ಧಿ ಆಗುತ್ತದೆ.  ಆಪಾದಮಸ್ತಕ ದೇಹದ ಪ್ರತಿಭಾಗವೂ ಒಂದಕ್ಕೊಂದು ಅನುಗುಣವಾಗಿ ವೃದ್ಧಿಸುವುದನ್ನು ಗಣನೆಯಲ್ಲಿ ಇಟ್ಟುಕೊಂಡೇ ಅಂಗಸಾಧನೆ ಮಾಡುವಾಗ ಎಲ್ಲ ಮಾಂಸಖಂಡಗಳಿಗೂ ಕಸರತ್ತು ಕೊಡಬೇಕು. ಇದರಿಂದ ಬಲ, ತಾಕತ್ತುಗಳು ಒದಗಿ ಚಲನೆಗಳಿಗೆ ಚುರುಕು ದಕ್ಷತೆಗಳು ಲಭಿಸುತ್ತವೆ. ನಿಂತ ಭಂಗಿ ಸೊಗಸಾಗಿರುತ್ತದೆ.

	ಚರ್ಮದ ಮಡಿಕೆ ಗೆರೆಗಳು, ದೇಹದ ಮಾಟ, ಸ್ನಾಯುಗಳ ಸಡಿಲಸ್ಥಿತಿಯಲ್ಲಿ ಇದ್ದಾಗ ಮತ್ತು ಸಂಕುಚಿತಸ್ಥಿತಿಯಲ್ಲಿ ಇದ್ದಾಗ ಕಾಣುವಂಥ ರೂಪರೇಖೆ ಮುಂಡದ ಮೇಲೆ ರುಂಡ ಕುಳಿತಿರುವ ಭಂಗಿ, ಚಲನೆಯ ಸೊಬಗು ಇವನ್ನು ದೇಹಸೌಷ್ಠವ ತುಲನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಯಾವುದೇ ದೇಶದಲ್ಲೇ ಆಗಲಿ ಇದಕ್ಕೆ ನಿರ್ದಿಷ್ಟ ಮೌಲ್ಯ ಪ್ರಮಾಣವಿಲ್ಲ. ದೇಹಸೌಷ್ಠವದ ಉತ್ಕøಷ್ಟತೆ ಆಯಾ ದೇಶಗಳಲ್ಲಿ ಉತ್ಕøಷ್ಟ ದೇಹಸೌಷ್ಠವ ಉಳ್ಳವರೆಂದು ಗಣ್ಯರಾದ ವ್ಯಕ್ತಿಗಳಿಂದ ತೀರ್ಮಾನವಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕಾದ ಅಗತ್ಯವನ್ನು ಪರಿಣತರು ಗಮನಕ್ಕೆ ತರಲಿಚ್ಛಿಸುತ್ತಾರೆ. ಭಾರತದಲ್ಲಿ ಅಂಗಸೌಷ್ಠವ ಸ್ಪರ್ಧಿಗಳು ಅನೇಕರಲ್ಲಿ ತೊಡೆ ಹಾಗೂ ಕಾಲಿನ ಮೀನಖಂಡಗಳು ದೃಢವಾಗಿರುವುದಿಲ್ಲ. ಇದು ವಿಷಾದನೀಯ. ಸಾಧನೆಯ ಮೊದಮೊದಲಲ್ಲೇ ಈ ವಿಷಯಕ್ಕೆ ತಕ್ಕ ಗಮನಕೊಟ್ಟು ಈ ಭಾಗಗಳು ಚೆನ್ನಾಗಿ ವೃದ್ಧಿಸುವಂತೆ ನೋಡಿಕೊಳ್ಳಬೇಕಾಗಿದೆ. ಮೀನಖಂಡದ ಸುತ್ತ ಕಾಲಳತೆ ಮೊಳಕೈಯನ್ನು ಬಿಗಿಯಾಗಿ ಮಡಚಿದಾಗಿನ ತೋಳಿನ ಸುತ್ತಳತೆಗಿಂತ ಕಡಿಮೆ ಇರಬಾರದು.

	ಉತ್ತಮ ದೇಹಸೌಷ್ಠವಕ್ಕೆ ಒಪ್ಪುವಂಥ ದೇಹದ ವಿವಿಧ ಅಂಗಗಳ ಅಳತೆಗಳನ್ನು ಸ್ಥೂಲವಾಗಿ ಈ ಕೆಳಗೆ ಬರೆದಿದೆ. ಹಾಗೆಯೇ ಕರ್ನಾಟಕದಲ್ಲಿ ಈಗ ಸುಮಾರು 30--40 ವರ್ಷಗಳ ಹಿಂದೆ ಅತ್ಯಂತ ಶ್ರೇಷ್ಠ ದೇಹಸೌಷ್ಠವ ಉಳ್ಳವರೆಂದು ಪ್ರಸಿದ್ಧರಾದ ಕೆ.ವಿ.ಅಯ್ಯರ್ ಅವರ ದೇಹದ ಅಳತೆಗಳನ್ನು ಕೊಡಲಾಗಿದೆ. ಅವರ (ಈಗ, 1977, ಅವರಿಗೆ 80 ವರ್ಷ) ಉಚ್ಛ್ರಾಯ ಕಾಲದಲ್ಲಿ ಭಾರತದಲ್ಲಿ ಮಾತ್ರವೇ ಅಲ್ಲದೆ ಪ್ರಪಂಚದಲ್ಲೆ ಅತಿಶ್ರೇಷ್ಠ ದೇಹಸೌಷ್ಠವ ಉಳ್ಳವರಲ್ಲಿ ಒಬ್ಬರೆಂದು ಕೆ.ವಿ.ಅಯ್ಯರ್ ಅವರು ಗಣಿಸಲ್ಪಟ್ಟಿದ್ದರು.

	ಉತ್ತಮ ದೇಹಸೌಷ್ಠವವಿರುವ ವ್ಯಕ್ತಿಯ ತೂಕ 70--75ಕೆ.ಜಿ; ವ್ಯಕ್ತಿಯ ಎತ್ತರ 170ಸೆಂಮೀ. ಎಂದು ಇಟ್ಟುಕೊಂಡರೆ ಆಗ ಆತನ ಅಂಗಾಗಗಳ ಅಳತೆಗಳು ಈ ತೆರನಾಗಿರಬೇಕು: 

	ಎದೆ (ಉಸಿರುಬಿಟ್ಟಾಗ) 95--100 ಸೆಂಮೀ. (ಎತ್ತರದ ಸುಮಾರು 60%)
	ಸೊಂಟ		......		75-80 ಸೆಂ.ಮೀ. (ಮೇಲಿನದಕ್ಕಿಂತ 20--25 ಸೆಂ.ಮೀ. ಕಡಿಮೆ)
ಮಣಿಕಟ್ಟು	......		17--19 ಸೆಂ.ಮೀ.
ಮೇಲ್ತೋಳು	.....		32--34 ಸೆಂ.ಮೀ.
ಕೆಳತೋಳು	......		28---30 ಸೆಂ.ಮೀ.
ತೊಡೆ		......		52 --56 ಸೆಂ.ಮೀ. (ಎತ್ತರದ 1/3ರಷ್ಟು)
ಮೀನು ಖಂಡ	......		30-32 ಸೆಂ.ಮೀ. (ಹೆಚ್ಚು ಕಡಿಮೆ ಮೇಲ್ತೋಳಿನಷ್ಟು)
ಕೆ.ವಿ. ಅಯ್ಯರ್ ಅವರ ದೇಹದ ಅಳತೆಗಳು: (ಸುಮಾರು 36 ವರ್ಷ ವಯಸ್ಸಾಗಿದ್ದಾಗ)
ಎತ್ತರ		---		170 .18 ಸೆಂ.ಮೀ.
ತೂಕ		---		73.48 ಕೆಜಿ. 
	ಎದೆ		---		109.22  ಸೆಂ.ಮೀ.
	ಸೊಂಟ		---		76.2  ಸೆಂ.ಮೀ.
ತೊಡೆ		---		58.42  ಸೆಂ.ಮೀ.  
ಮಣಿಕಟ್ಟು	---		17.78   ಸೆಂ.ಮೀ.
ಮೇಲ್ತೋಳು	---		41.275  ಸೆಂ.ಮೀ.
	ಕೆಳತೋಳು	---		34.29  ಸೆಂ.ಮೀ.
	ಮೀನಖಂಡ	---		40  ಸೆಂ.ಮೀ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ